ಸಿನ್ನಮೋಮಮ್ ರೈಪಾರಿಯಮ್ Gamble - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 7 ಮೀ.ವರೆವಿಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳು ಮತ್ತು ನಯವಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಅಭಿಮುಖದಿಂದ ಉಪಅಭಿಮುಖವರೆಗಿನ ಮಾದರಿಯಲ್ಲಿ ಜೋಡನೆಗೊಂಡಿರುತ್ತವೆ;ತೊಟ್ಟುಗಳು 1 ಸೆಂ.ಮೀ. ವರೆಗಿನ ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟಪೀನ ಮಧ್ಯ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ; ಪತ್ರಗಳು 18 x 15 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ರೇಖಾತ್ಮಕ-ಭರ್ಜಿ ಆಕಾರದಲ್ಲಿರುತ್ತವೆ. ಪತ್ರದ ತುದಿ ಬರಬರುತ್ತಾ ಸಣ್ಣದಾಗುತ್ತಾ ಹೋಗುತ್ತವೆ ಮತ್ತು ಚೂಪಾದ ಅಥವಾ ಕೊಂಚ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಬುಡ ಚೂಪಾದುದರಿಂದ ದುಂಡಾದ ರೀತಿಯಲ್ಲಿರುತ್ತದೆ; ಪತ್ರಗಳ ಮೇಲ್ಮೈ ಕಾಗದವನ್ನೊಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತವೆ; ಪತ್ರಗಳು 3 ಆಧಾರ ಅಥವಾಅಗ್ರ-ಆಧಾರ ನಾಳಗಳನ್ನು ಹೊಂದಿದ್ದು ಪಾರ್ಶ್ವ ನಾಳಗಳು ಬಹುಮಟ್ಟಿಗೆ ಎಲೆಯ ಅಗ್ರವನ್ನು ತಲುಪುವುದಿಲ್ಲ; ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ ಹಾಗೂ ಎಲೆದಿಂಡಿಗೆ ಅಡ್ಡವಾಗಿ ಕೂಡುವ ರೀತಿಯವು.ಉನ್ನತ ದರ್ಜೆಯ ನಾಳಗಳು ಸೂಕ್ಷ್ಮ-ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನ ಅಥವಾ ಉಪ-ತುದಿಯಲ್ಲಿನ ,ಹಲವು ಹೂಗಳಿಂದ ಹೆಚ್ಚಿನ ಹೂಗಳುಳ್ಳ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾರಂಭಿ ಮಾದರಿಯದಾಗಿದ್ದು ತೆಳುವಾದ ಪುಷ್ಪಮಂಜರಿ ವೃಂತವನ್ನು ಹೊಂದಿರುತ್ತವೆ.
ಕಾಯಿ /ಬೀಜ : ಕಾಯಿಗಳು ಬೆರ್ರಿ ರೀತಿಯವಾಗಿದ್ದು ಒಂದು ಬೀಜವನ್ನೊಳಗೊಂಡಿರುತ್ತದೆ.

ಜೀವಪರಿಸ್ಥಿತಿ :

1200ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ತೊರೆಗಳ ಬದಿಯಲ್ಲಿ ಅಪರೂಪವಾಗಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಪರೂಪವಾಗಿ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಬೆಳೆಯುತ್ತದೆ.

ಸ್ಥಿತಿ :

ದುರ್ಬಲ ಸ್ಥಿತಿ (IUCN 2000).

ಗ್ರಂಥ ಸೂಚಿ :

Kew Bull. 1925. 128. 1925; Bull.Bot.Surv. India 25: 114. 1983; Gamble, Fl. Madras 2: 1224. 1993 (re. ed); Sasidharan, Biodiversity documentation for Kerala- Flowering Plants, part 6: 396. 2004; Saldanha, Fl. Karnataka 1: 62. 1996.

Top of the Page