ಬ್ಲಾಕಿಯ ಡೆನ್ಯುಡೇಟ Benth. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ಸಾಮಾನ್ಯವಾಗಿ ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಕಾರ,ಉಪ- ದುಂಡಾಕಾರದಲ್ಲಿದ್ದು ಹೆಚ್ಚಿನ ಸಂಖ್ಯೆಯಲ್ಲಿನ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ ಮತ್ತು ಕಾಲುವೆ ಗೆರೆಗಳನ್ನು ಹೊಂದಿರುತ್ತವೆ .
ಜಿನುಗು ದ್ರವ : ಕತ್ತರಿಸಿದಾಗ ಎಲೆಗಳು ಮತ್ತು ಕುಡಿಕೊಂಬೆಗಳ ತುದಿಯಿಂದ ಬೆಳ್ಳಗಿನ ಸಸ್ಯ ರಸ ಒಸರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಅಥವಾ ಉಪ-ಅಭಿಮುಖಿಗಳಾಗಿದ್ದು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಕಾವಿನೆಲೆಗಳು ಉದುರಿಹೋಗುವಂತವು;ತೊಟ್ಟುಗಳು 0.5 – 1.5 ಸೆಂ.ಮೀ. ವರೆಗಿನ ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ಪತ್ರಗಳು 6 -19 X 2.5 – 8 ಸೆಂ. ಮೀ. ಗಾತ್ರ, ಅಂಡವೃತ್ತ ದಿಂದ ಅಂಡಾಕಾರದಲ್ಲಿದ್ದು ಆಕಾರದಲ್ಲಿ ವೈವಿಧ್ಯತೆ ಹೊಂದಿರುತ್ತವೆ , ತುದಿ ಮೊಂಡುಚೂಪಿನಿಂದ ಕ್ರಮೇಣ ಚೂಪಾಗುವ ರೀತಿಯಲ್ಲಿರುತ್ತವೆ, ಬುಡ ಅಸಮ ರೂಪಿಯಾಗಿ ಅಥವಾ ದುಂಡಾಗಿರುವುದರಿಂದ ಚೂಪಾಗಿರುವ ಮಾದರಿಯಲ್ಲಿರುತ್ತದೆ, ಅಂಚು ನಯವಾಗಿರುತ್ತದೆ. ಮೇಲ್ಮೈಕಾಗದವನ್ನೋಲುವ ರೀತಿಯಲ್ಲಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 5-8 ಜೋಡಿಗಳಿರುತ್ತವೆ, ಅತಿ ತಳಗಿನ ಜೋಡಿಗಳು ಅಭಿಮುಖಿಗಳಾಗಿರುತ್ತವೆ ಮತ್ತು ತೀಕ್ಷ್ಣವಾದ ಕೋನ ಹೊಂದಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ ಮತ್ತು ಗಂಡು ಮತ್ತು ಹೆಣ್ಣು ಹೂಗಳು ಒಂದೇ ಸಸ್ಯದಲ್ಲಿರುತ್ತವೆ; ಗಂಡು ಹೂಗಳು ತುದಿಯಲ್ಲಿನ ತೆಳುವಾದ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಗಂಡು ಪುಷ್ಪ ಮಂಜರಿಯ ಬುಡ ಭಾಗದಲ್ಲಿದ್ದು ಕಡಿಮೆ ಸಂಖ್ಯೆಯಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಅಂಡವೃತ್ತ ಅಥವಾ ಉಪ-ಗೋಳಾಕಾರದಲ್ಲಿದ್ದು ಆಳವಾದ 3 ಹಾಲೆಗಳ ಸಮೇತವಿದ್ದು 3 ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

900 ಮೀ. ಎತ್ತರದವರೆಗಿನ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳಿಂದಒಣ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ಬಹುತೇಕವಾಗಿ ಮಧ್ಯ ಸಹ್ಯಾದ್ರಿಯ ಕೊಡಗು ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

J.Linn. Soc.Bot. 17:226.1880;Gamble, Fl. Madras 2:1338.1993 (rep.ed.); Sasidharan, Biodiversity documentation for Kerala – Flowering plants, part 6, 411.2004;Saldanha, 2; 120.1996.

Top of the Page